ಕೋಪೆನ್ ಹೇಗೆನ್

ಡೆನ್ಮಾರ್ಕಿನ ರಾಜಧಾನಿ ಮತ್ತು ಸ್ಕಾಂಡಿನೇವಿಯದ ದೊಡ್ಡ ಪಟ್ಟಣ. ವಾಣಿಜ್ಯ ಮತ್ತು ಕೈಗಾರಿಕಾ ಕೇಂದ್ರ. ಹಡಗು ನಿಲ್ದಾಣ. ಅಂತರರಾಷ್ಟ್ರೀಯ ರಫ್ತು ವ್ಯಾಪಾರಕ್ಕೆ ಹೆಸರಾಗಿದೆ. ಪ್ರಾಚೀನವಾದ ಅನೇಕ ದೊಡ್ಡ ಕಟ್ಟಡಗಳು ಇಲ್ಲಿವೆ. ಇದು ಐತಿಹಾಸಿಕವಾಗಿಯೂ ಮಹತ್ತ್ವ ಪಡೆದಿದೆ. ಡೆನ್ಮಾರ್ಕಿಗೆ ಪೂರ್ವತೀರದಲ್ಲಿರುವ ಈ ನಗರದ ಜನಸಂಖ್ಯೆ 8,72,679 (1968).

ಕೋಪೆನ್‍ಹೇಗೆನಿನ ನಡುವಿನ ಭಾಗದಲ್ಲಿ 6,000 ವರ್ಷಗಳಿಂದಲೂ ಜನವಸತಿಯಿತ್ತೆಂಬುದು ಉತ್ಖನನಗಳಿಂದ ಗೊತ್ತಾಗುತ್ತದೆ. ಕ್ರಿ.ಶ.1000ದ ವೇಳೆಗೆ ಇಲ್ಲಿದ್ದ ಹ್ಯಾವ್ನ್ ಎಂಬ ಹಳ್ಳಿ ವಾಣಿಜ್ಯ ಮತ್ತು ಆಯಕಟ್ಟು ದೃಷ್ಟಿಯಿಂದ ಪ್ರಾಮುಖ್ಯ ಗಳಿಸಿತ್ತು 1167ರಲ್ಲಿ ರಸ್ಕಿಲೆಯ ಬಿಷಪ್ ಆಪ್ಸಲಾನ್ ಎಂಬ ಪ್ರಸಿದ್ಧರಾಜಕಾರಣಿ ಇಲ್ಲಿಯ ಜನರ ರಕ್ಷಣೆಗಾಗಿ ಒಂದು ಭದ್ರವಾದ ಕೋಟೆಯನ್ನು ಕಟ್ಟಿಸಿದ. 1445ರಲ್ಲಿ ಡೇನಿಷ್ ದೊರೆಗಳ ರಾಜಧಾನಿ ಇಲ್ಲಿಗೆ ವರ್ಗವಾದ ಮೇಲೆ ನಗರ ಶೀಘ್ರವಾಗಿ ಬೆಳೆಯತೊಡಗಿತು. ಕೋಪೆನ್‍ಹೇಗೆನ್ ವಿಶ್ವವಿದ್ಯಾಲಯ ಸ್ಥಾಪನೆಯಾದ್ದು 1479ರಲ್ಲಿ. 17ನೆಯ ಶತಮಾನದಲ್ಲಿ ಈ ನಗರ ಮತ್ತಷ್ಟು ವಿಶಾಲವಾಗಿ ಬೆಳೆಯಿತು. ಇದಕ್ಕೆ ಕಾರಣನಾದವನು 4ನೆಯ ಕ್ರಿಶ್ಚನ್ ದೊರೆ. ಶಿಲ್ಪಕೆಲಸಗಳ ಬಗ್ಗೆ ತುಂಬ ಅಭಿಮಾನವಿಟ್ಟುಕೊಂಡಿದ್ದ ಈತ ನಗರದಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕಟ್ಟಿಸಿದ; ವಿಶಾಲವಾದ ರಾಜಬೀದಿಗಳನ್ನು ನಿರ್ಮಿಸಿದ. ಕೋಪೆನ್‍ಹೇಗೆನಿನ ಹಳೆಯ ಭಾಗ ನಿರ್ಮಾಣವಾದ್ದು ಹೀಗೆ. ಸುಂದರವಾದ ಅನೇಕ ದೊಡ್ಡ ಕಟ್ಟಡಗಳು ಇರುವುದು ಈ ಭಾಗದಲ್ಲಿಯೇ. ರೌಂಡ್ ಟವರ್ ಎಂಬ ಚರ್ಚ್‍ಗೋಪುರ ವಿನಿಮಯ ಕೇಂದ್ರದ ಕಟ್ಟಡ ಮೊದಲಾದವನ್ನು ಹೆಸರಿಸಬಹುದು. ರೌಂಡ್ ಟವರಿಗೆ ಸಮೀಪದಲ್ಲಿರುವ ಅಮಾಲಿಯೆನ್‍ಬರ್ಗ್ ಅರಮನೆಯನ್ನು ಕಟ್ಟಿದ್ದು 18ನೆಯ ಶತಮಾನದಲ್ಲಿ. 1900ರಿಂದೀಚೆಗೆ ಆಧುನಿಕ ರೀತಿಯಲ್ಲಿ ಕಟ್ಟಡಗಳನ್ನು ನಿರ್ಮಿಸಲಾಗಿದೆ. ಸೇ.75 ರಷ್ಟು ಜನ ಇವುಗಳಲ್ಲಿ ವಾಸಿಸುತ್ತಾರೆ.

ನಗರದ ಜನಸಂಖ್ಯೆಯಲ್ಲಿ ಸುಮಾರು ಅರ್ಧಭಾಗದಷ್ಟು ಜನ ಕೈಗಾರಿಕೆ ಮತ್ತು ಕುಶಲ ಕೈಗಾರಿಕೆಗಳಲ್ಲಿ ನಿರತರಾಗಿದ್ದಾರೆ. ನೌಕಾ ನಿರ್ಮಾಣ ಮೊದಲಾದ ಕೆಲಸಗಳಲ್ಲಿ ಇವರು ಹೆಸರಾಗಿದ್ದಾರೆ.

ಕೋಪೆನ್‍ಹೇಗೆನ್ ಡೆನ್ಮಾರ್ಕಿನಲ್ಲಿಯೇ ಅತ್ಯಂತ ಪ್ರಮುಖ ವಾಣಿಜ್ಯ ಕೇಂದ್ರವಾಗಿದೆ. ಹೊರದೇಶಗಳ ವ್ಯಾಪಾರ ಈ ನಗರದ ಮೂಲಕವೇ ನಡೆಯುತ್ತದೆ. ಡೆನ್ಮಾರ್ಕಿನ ಬಹುತೇಕ ಎಲ್ಲ ಹಡಗು ಕಂಪನಿಗಳ ಮುಖ್ಯ ಕಚೇರಿಗಳೂ ಇಲ್ಲಿವೆ. ನಗರಕ್ಕೆ ಉತ್ತರ ಭಾಗದಲ್ಲಿ ಬಂದರಿದೆ. ಇದು ಬಾಲ್ಟಿಕ್ ಪ್ರದೇಶದ ಮುಖ್ಯ ಬಂದರುಗಳಲ್ಲೊಂದು. ಇದನ್ನು ಕಟ್ಟಿದ್ದು 1894ರಲ್ಲಿ. ನಗರದಿಂದ ಬೇರೆಬೇರೆ ಸ್ಥಳಗಳಿಗೆ ಸಮುದ್ರಯಾನ ಸೌಕರ್ಯ ಇದೆ. ದಕ್ಷಿಣ ಭಾಗದ ಪ್ರಮುಖನಗರಗಳಿಗೆ ರೈಲುಸಂಪರ್ಕವಿದೆ. ಉತ್ತರ ಯೂರೋಪಿನ ಪ್ರಮುಖ ವಿಮಾನ ನಿಲ್ದಾಣಗಳಲ್ಲಿ ಕೋಪೆನ್ ಹೇಗೆನಿನಲ್ಲಿರುವುದೂ ಒಂದು.

ಬೇರೆ ಬೇರೆ ದೇಶಗಳಿಂದ ಕಚ್ಚಾಸಾಮಗ್ರಿ ಮತ್ತು ಕೆಲಬಗೆಯ ಯಂತ್ರೋಪಕರಣಗಳು ಈ ನಗರದ ಮೂಲಕ ಆಮದಾಗುತ್ತವೆ. ಆಮದಿಗಿಂತ ರಫ್ತು ಹೆಚ್ಚು. ವ್ಯವಸಾಯೋತ್ಪನ್ನಗಳು, ಯಂತ್ರಗಳು, ಕಬ್ಬಿಣ ಮತ್ತು ಉಕ್ಕಿನ ಸಾಮಾನುಗಳು ಹಾಗೂ ರಾಸಾಯನಿಕ ವಸ್ತುಗಳು ರಫ್ತಾಗುತ್ತವೆ.

ವಾಣಿಜ್ಯ ಮತ್ತು ಕೈಗಾರಿಕೆಗಳಿಗೆ ಈ ನಗರ ಹೆಸರಾಗಿರುವಂತೆಯೇ ಸಾಂಸ್ಕøತಿಕ ಸಂಸ್ಥೆಗಳಿಗೂ ಹೆಸರಾಗಿದೆ. ಈ ನಗರದಲ್ಲಿ ವಿವಿಧ ಬಗೆಯ ಸಾಂಸ್ಕøತಿಕ ಸಂಘ ಸಂಸ್ಥೆಗಳುಂಟು. ರಾಯಲ್ ಡೇನಿಷ್ ಅಕ್ಯಾಡೆಮಿ ಆಫ್ ಸೈನ್ಸ್; ರಾಯಲ್ ಅಕ್ಯಾಡೆಮಿ ಆಫ್ ಫೈನ್ ಆಟ್ರ್ಸ್ ಮೊದಲಾದ ಸಾಂಸ್ಕøತಿಕ ಸಂಸ್ಥೆಗಳನ್ನು ಹೆಸರಿಸಬಹುದು. ಹಾಗೆಯೇ ಡೆನ್ಮಾರ್ಕಿನ ತಾಂತ್ರಿಕ ಕಾಲೇಜು, ಕೃಷಿ ಕಾಲೇಜು, ಸೀರಂ ಇನ್‍ಸ್ಟಿಟ್ಯೂಟ್-ಇವು ಕೆಲವು ಉನ್ನತ ಶಿಕ್ಷಣ ಸಂಸ್ಥೆಗಳು. ಇಲ್ಲೊಂದು ರಾಯಲ್ ಲೈಬ್ರರಿ ಇದೆ. ಅಂತರರಾಷ್ಟ್ರೀಯ ಖ್ಯಾತಿಯ ವಸ್ತುಸಂಗ್ರಹಾಲಯವೂ ಇಲ್ಲಿದೆ. ಪ್ರಾಚೀನಕಾಲದ ಅನೇಕ ಬಗೆಯ ವಸ್ತುಗಳು, ಶಾಸನಗಳು ಮೊದಲಾದವನ್ನು ಇಲ್ಲಿ ಸಂಗ್ರಹಿಸಲಾಗಿದೆ. ಇಲ್ಲಿಯ ವಿಶಾಲವಾದ ಉದ್ಯಾನಗಳು ನಗರದ ಸೌಂದರ್ಯವನ್ನು ಹೆಚ್ಚಿಸಿವೆ.

ಎರಡನೆಯ ಮಹಾಯುದ್ಧದ ಸಮಯದಲ್ಲಿ ಕೋಪೆನ್‍ಹೇಗೆನ್ ನಗರ ಪ್ರಮುಖ ಹಡಗು ನಿರ್ಮಾಣ ಕೇಂದ್ರವೆಂದು ಹೆಸರಾಗಿತ್ತು. ಈ ನಗರವನ್ನು 1940-45ರಲ್ಲಿ ಜರ್ಮನರು ತಮ್ಮ ವಶದಲ್ಲಿಟ್ಟುಕೊಂಡಿದ್ದರು.

ಖ್ಯಾತ ಲೇಖಕರನೇಕರು ಈ ನಗರದಲ್ಲಿ ವಾಸವಾಗಿದ್ದರು ಎಂಬುದೂ ಗಮನಾರ್ಹ. 17ನೆಯ ಶತಮಾನದ ಪ್ರಖ್ಯಾತ ನಾಟಕಕಾರ ಲಾಡ್‍ವಿಜ್ ಹಾಲ್‍ಬಾರ್ಗ್, ಕಿನ್ನರ ಕತೆಗಳ ಸೃಷ್ಟಿಕರ್ತ ಕ್ರಿಶ್ಚನ್ ಅಂಡರ್‍ಸನ್, ತತ್ತ್ವಜ್ಞಾನಿ ಮತ್ತು ಲೇಖಕ ಸೊರೆನ್ ಕಿರ್ಕೆಗಾರ್ ಇವರು ಕೆಲವರು.   						 *

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ